ಮಾನವೀಯತೆ ಮನುಜನ ವ್ಯಕ್ತಿತ್ವಕ್ಕೆ ಕಳಶಪ್ರಾಯ
ಮರೆತುದಾದರೆ ಅದನು, ತಪ್ಪಿದ್ದಲ್ಲ ಮನುಕುಲಕೆ ಅಪಾಯ
ಪ್ರಾಣಿಗಳಲ್ಲಿ ಅತ್ಯುನ್ನತ ಸ್ಥಾನ ಮನುಜಗೆ,
ಅದುವೇ ಬಹುದೊಡ್ಡ ಧನ್ಯತೆ ನಮಗೆ.
ಯಾಂತ್ರೀಕೃತ ಬದುಕಲ್ಲಿ ಮೌಲ್ಯಗಳು ಅದೃಶ್ಯವಾಗದಿರಲಿ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯತೆಯ ಕೊಂಡಿ ಕಳಚದಿರಲಿ
ಮತ್ತೊಬ್ಬನ ಕಷ್ಟಕ್ಕೆ ಕರತಾಡನ ಬೇಡ
ಮುಂದೊಮ್ಮೆ ನಮಗೂ ಆ ದಿನವುಂಟೆಂದು ಮರೆಯಬೇಡ
ಸ್ಪರ್ಧೆ, ಪ್ರತಿಸ್ಪರ್ಧೆ ಜೀವನದ ಅವಿಭಾಜ್ಯ ಅಂಗ
ಅದೆಂದಿಗೂ ತಂದೊಡ್ಡದಿರಲಿ ವ್ಯಕ್ತಿತ್ವಗಳಿಗೆ ಭಂಗ
ತಂತ್ರಜ್ಞಾನ ನಮ್ಮ ಬುದ್ಧಿಯ ಶ್ರೇಷ್ಟತೆಗೆ ಹಿಡಿದ ಕನ್ನಡಿ
ಅದರೊಟ್ಟಿಗೆ,ಮನುಜನ ಭಾವನೆಗಳಿಗೂ ಸ್ಪಂದಿಸಿ ಮುನ್ನಡಿ
ಎದುರಾಳಿಯನ್ನು ಎದುರಿನಿಂದ ಎದುರಿಸೋಣ
ಮಾನವೀಯತೆ ಮರೆತು ಹಿಂದಿನಿಂದ ಯಾಕಾದರೂ ವಂಚಿಸೋಣ?
ನಾವು ಏನೇ ಆದರೂ ಮೊದಲು ಮಾನವರು.
ನಮ್ಮದೇ ಮನುಕುಲದ ಮತ್ತೊಬ್ಬ ಮನುಜನ ಪ್ರೀತಿಸುವವರು.
ಇತರರ ಎಡವುವಿಕೆಯನ್ನೇ ಎದುರು ನೋಡುವ ಈ ಹೊತ್ತಲ್ಲಿ
ಹುದುಗಿಸಿಬಿಡುವರೋ ಏನೋ ಮಾನವೀಯತೆಯನ್ನು ಕಗ್ಗತ್ತಲಲ್ಲಿ?
ಈಗಲಾದರೂ ಎಚ್ಚೆತ್ತು ನಿಜವಾದ ಮನುಜರಾಗುವ
ಸಂಪತ್ತಿನ ಹಿಂದೆಯೇ ಬೆನ್ನತ್ತುವ ಬದಲು,ಇತರರ ನೋವುಗಳಲ್ಲಿಯೂ ಭಾಗಿಯಾಗುವ.
- ಅನುಪಮ .ಬಿ .ಜಿ ಪ್ರಸಾದ್
No comments:
Post a Comment