ಜೀವನ ಒಂದು ಬೃಹತ್ ಹೊತ್ತಗೆ,
ಎಷ್ಟು ಓದಿದರೂ, ಗ್ರಹಿಸೆವು ನಮ್ಮೀ ಬುದ್ಧಿಮತ್ತೆಗೆ
ಜೀವನದ ಹೊತ್ತಗೆಯನ್ನು ಓದಿರುವೆವು ಎಂಬುವರು ಕೆಲವರು,
ಆದರೆ, ಅದು ಕೇವಲ ಹೊತ್ತಗೆಯ ಮುಖಪುಟವೆಂಬುದನು ಅವರರಿಯರು.
ಅದರ ಒಳಪುಟಗಳನ್ನು ನಾವಾಗಿಯೇ ಓದುವುದು ಅಸುಲಭ
ಜೀವನವೇ ಹೊತ್ತಗೆಯ ಪುಟಗಳನ್ನು ತಿರುವಿಹಾಕುವ ಸಾಹೇಬ
ತಿರುವಿದ ಅಧ್ಯಾಯವು ಬೇವೋ? ಬೆಲ್ಲವೊ? ಸ್ವೀಕರಿಸುವುದಿಲ್ಲಿ ಅನಿವಾರ್ಯ...
ಯಾವುದಾದರೇನು? ಬಂದಿಹುದು ಪರೀಕ್ಷಿಸಲೆಂದೇ ನಮ್ಮ ಆತ್ಮಸ್ಥೈರ್ಯ..
ಬೆಲ್ಲವಾದೊಡೆ ಬಗೆ ಬಗೆದು ಹೀರೋಣ ಅದರ ಸವಿಯ
ಬೇವಾದೊಡೆ ಗಟ ಗಟನೆ ಕುಡಿದು ಸಿದ್ದವಾಗುವ, ಎದುರಿಸಲು ಕಷ್ಟಗಳ ಹಾದಿಯ....
ಈ ಬೇವಾದರೂ ತಾನೇ ಎಷ್ಟು ದಿನ?
ಬರಲೇ ಬೇಕಲ್ಲ ಬೆಲ್ಲದ ಅಧ್ಯಾಯ ಮುಂದೊಂದು ದಿನ?
ಜೀವನವು ಕಷ್ಟ ಸುಖಗಳ ಸಮ್ಮಿಶ್ರಣ
ಕಷ್ಟ ಬಂದೊಡನೆಯೇ ಕೊರಗುವಿರೇಕೆ ಪ್ರತಿಕ್ಷಣ?
ದುಡುಕದಿರಿ, ಮರುಗದಿರಿ ಬೇವಿನ ಕ್ಷಣಗಳ ಬಗೆಗೆ,
ಸದಾ, ಅರಸಿ ಹೊರಡದಿರಿ ಬೆಲ್ಲದ ಸವಿಯೆಡೆಗೆ.
ಹೆಚ್ಚು ಹೆಚ್ಚು ಬೇವನ್ನು ಸವಿದವನಾಗುವ ಮೇಧಾವಿ
ಬರೀ ಬೆಲ್ಲವನ್ನೇ ಅರಸಿದರೆ, ಕೇವಲ ಅವನೊಬ್ಬ ಜೀವಿ.
- ಅನುಪಮ ಬಿ ಜಿ
No comments:
Post a Comment