ಸಂಗಾತಿಯ ಆಗಮನ ಜೀವನದ ಪ್ರಮುಖ ಘಟ್ಟಗಳಲ್ಲೊಂದು
ಅದಕಾಗಿ ವರುಷಗಳೇ ಕಾಯುವೆವು , ಕನಸುಗಳ ಹೊತ್ತುಕೊಂಡು
ಕಾದಿರುವರು ಎಲ್ಲೋ , ನಮಗಾಗೇ , ಜನ್ಮ ತಾಳಿಕೊಂಡು
ಅದ್ಯಾವುದೋ ಬಂಧ ತಂದುಗೂಡಿಸುವುದಿಬ್ಬರನ್ನೂ ಅರಸಿಕೊಂಡು
ಬದುಕೆಂಬ ಬಂಡಿಯ ನೊಗವೆಳೆಯುವ ಆ ಎರಡು ಜೀವಿಗಳೇ ಸಂಗಾತಿಗಳು
ಪರಸ್ಪರ ವ್ಯಕ್ತಿತ್ವದ ಬಗೆಗೆ ಸಮಾನತೆಯಿದ್ದಾಗಲೇ , ಉಳಿಯುವುದು ಸಂಬಂಧಗಳು
ಇಬ್ಬರ ಮನಸುಗಳೂ ಬೆರೆತು ಅರಿತುಕೊಂಡಾಗಲೇ ಏಳುವುದು ಅನುರಾಗದ ಅಲೆಗಳು
ಇದನ್ನರಿಯದೆ ಕಳಚಿಕೊಂಡಿವೆ , ಅದೆಷ್ಟೋ , ಮದುವೆಗಳ ಕೊಂಡಿಗಳು
ಬಾಳಿನ ಬಂಗಾರದ ಕ್ಷಣಗಳಿಗೆ ಸಾಕ್ಷಿಯಾಗುವುದು ನಮ್ಮೀ ಸಂಗಾತಿ
ಮುಳ್ಳಿನ ಹಾದಿಯಲ್ಲೂ ಜೊತೆಯಾಗೇ ಸಾಗುವವರೇ ಸತಿ ಪತಿ
ಪರಸ್ಪರ ಅಂತರಂಗದ ಸೌಂದರ್ಯವರಿತವರು ಕಡೆವರೆಗೂ ನವ ದಂಪತಿ
ಸ್ವಯಂ ಪ್ರತಿಷ್ಟೆ , ಅಹಂಕಾರಗಳೇ ಮಾಡುವುದು ಮಧುರವಾದ ಸಂಬಂಧವನ್ನು ಬೆಂಕಿಗಾಹುತಿ.
ಎಂದಿಗೂ ಬಂಧನದ ಗೂಡು ಕಟ್ಟದಿರಿ ನಿಮ್ಮ ಪ್ರೀತಿಗೆ
ಸ್ವಚ್ಚಂಧ ಹಾರಾಟವೇ ಪ್ರಿಯವಾದುದು ಪ್ರಣಯ ಪಕ್ಷಿಗಳಿಗೆ
ಪರಸ್ಪರ ಚರ್ಚಿಸಿ , ಬಗೆಹರಿಸಿ ಬಂದೆರಗಿದಾಗ ವಿಷಮ ಗಳಿಗೆ
ಉತ್ತಮ ಸಂಗಾತಿಯು ನಿಜವಾಗಿಯೂ ಬೆನ್ನೆಲುಬಿನಂತೆ ನಿಮ್ಮ ಬಂಗಾರದ ಬಾಳಿಗೆ.
- ಅನುಪಮ .ಬಿ .ಜಿ ಪ್ರಸಾದ್